ಈ ಕೆಳಕಂಡ ಹೇಳಿಕೆಯನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯ ಪರವಾಗಿ ರಾಜ್ಯ ಕಾರ್ಯದರ್ಶಿ ವಿಜೆಕೆ ನಾಯರ್ ನೀಡಿದ್ದಾರೆ.
ಕರ್ನಾಟಕದಲ್ಲಿ ನಡೆದ ಚರ್ಚಗಳ ಮೇಲಿನ ದಾಳಿಗಳ ಕುರಿತು ವಿಚಾರಣೆ ನಡೆಸಿದ ನ್ಯಾ.ಸೋಮಶೇಖರ್ ಆಯೋಗದ ಮಧ್ಯಂತರ ವರದಿಯು ಹಿಂದುತ್ವವಾದಿ ಸಂಘಪರಿವಾರ ನೇತೃತ್ವದ ಕೋಮುವಾದಿ ಶಕ್ತಿಗಳಿಗೆ ನೀಡಿದ ಪ್ರಹಾರವಾಗಿದೆ. ಚರ್ಚಗಳ ಮೇಲಿನ ದಾಳಿಯ ದುಷ್ಕೃತ್ಯದ ಆರೋಪಗಳಿಂದ ನುಣುಚಿಕೊಳ್ಳುವ ನಿಟ್ಟಿನಲ್ಲಿ ಸಹಕರಿಸುವರೆಂಬ ನಿರೀಕ್ಷೆಯೊಂದಿಗೆ ಸಂಘಪರಿವಾರ ಆಯ್ಕೆ ಮಾಡಿದ ವ್ಯಕ್ತಿಯ ಅಧ್ಯಕ್ಷತೆಯ ಆಯೋಗವೇ ಇಂತಹ ವರದಿಯನ್ನು ನೀಡಿದೆ. ಆಯೋಗವು ದಾಳಿಯಲ್ಲಿ ಭಜರಂಗದಳ ಮತ್ತು ಹಲವು ಸೇನೆಗಳ ಪಾತ್ರವನ್ನು ಗುರುತಿಸಿದೆ.ಈ ತನಿಖೆಯು ಚರ್ಚಗಳ ಮೇಲಿನ ಧಾಳಿಯಲ್ಲಿ ಸಂಘ ಪರಿವಾರದ ನಾಯಕ ಆರೆಸ್ಸೆಸ್ ಮತ್ತು ಅದರ ಬೆಂಬಲಕ್ಕೆ ನಿಂತ ಸರ್ಕಾರಿ ಅಧಿಕಾರಿಗಳು ಮತ್ತು ರಾಜ್ಯ ಬಿಜೆಪಿ ಸರ್ಕಾರದ ಮಂತ್ರಿಗಳ ಪಾತ್ರವನ್ನು ಅನಾವರಣಗೊಳಿಸಲಿದೆಯೇ ಎಂಬುದಕ್ಕೆ ವರದಿಯನ್ನು ಪೂರ್ಣವಾಗಿ ಪರಿಶೀಲಿಸಬೇಕಾಗಿದೆ. ಮತ್ತು ಅಂತಿಮ ವರದಿಯೂ ಬರಬೇಕಿದೆ. ಸಂವಿಧಾನ - ಕಾನೂನಿನ ಆಡಳಿತ ಮತ್ತು ಜಾತ್ಯತೀತತೆಗೆ ಬದ್ಧವಾದ ಜನರು ತಮ್ಮ ಜಾತ್ಯಾತೀತತೆಯ ಕುರಿತ ನಿರಂತರವಾದ ಪ್ರಚಾರ ಹಾಗೂ ದೃಢವಾದ ನಿಲುವು ವ್ಯರ್ಥವಾಗಿ ಹೋಗುವುದಿಲ್ಲವೆಂದು ಸಮಾಧಾನ ಪಟ್ಟುಕೊಳ್ಳಬಹುದಾಗಿದೆ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯು - ಸ್ಥಾಪಿತ ಹಿತಾಸಕ್ತಿಗಳು ಒಳಗೆ ತೂರಿಕೊಂಡಿದ್ದಾಗಲೂ ಒಂದಷ್ಟು ಕಸವು ಉಳಿಸಿಕೊಂಡಿದೆ. ನ್ಯಾಯಾಂಗ ವ್ಯವಸ್ಥೆಯು ತನ್ನ ಸಂರಚನೆಯಲ್ಲೆ ಕೆಲವೊಂದು ಅನುಕೂಲಗಳನ್ನು ಒಳಗೊಂಡಿದ್ದು ಈ ಹಂತದಲ್ಲಿ ಆಯೋಗದ ವರದಿಯು ಅತ್ಯಂತ ಪ್ರಯೋಜನಕಾರಿಯಾಗಿ ಹೊರಬಿದ್ದಿದೆ.ಇಂತಹ ಕೋಮುವಾದಿ ದಾಳಿಗಳನ್ನು ವಿರೋಧಿಸುವಲ್ಲಿ ಮುಂಚೂಣಿಯಲ್ಲಿರುವ ಸಿಪಿಐ(ಎಂ) ಪಕ್ಷದ ಕರ್ನಾಟಕ ರಾಜ್ಯ ಸಮಿತಿಯು ಈ ಸಕಾರಾತ್ಮಕ ಪ್ರವೃತ್ತಿಯನ್ನು ಗುರುತಿಸುತ್ತದೆ.
ಆಯೋಗದ ವರದಿಯನ್ನು ಒಪ್ಪಿಕೊಳ್ಳುವಂತಾಗಲು ಮತ್ತು ಅಪರಾಧಿಗಳನ್ನು ಶಿಕ್ಷಿಸುವ ಕ್ರಮವಹಿಸುವಂತಾಗಲು ಮತ್ತು ಈ ಅಪರಾಧಿಗಳಿಗೆ ಸಹಕರಿಸಿದವರಿಗೆ ಸೂಕ್ತ ಶಿಕ್ಷೆಯಾಗುವಂತಾಗಲು ಜಾತ್ಯಾತೀತತೆ ಮತ್ತು ಕಾನೂನಿನ ಆಡಳಿತೆಯನ್ನು ಎತ್ತಿಹಿಡಿಯುವ ಬದ್ಧತೆಯುಳ್ಳ ಎಲ್ಲರೂ ಒತ್ತಾಯಿಸಬೇಕೆಂದು ಕರೆ ನೀಡುತ್ತದೆ. ಇದನ್ನು ಕೇವಲ ಶಾಸನ ಸಭೆಯಲ್ಲಿ ಪ್ರಾತಿನಿಧ್ಯ ಹೊಂದಿರುವ ರಾಜಕೀಯ ಪಕ್ಷಗಳಿಗೆ ಬಿಡುವುದು ಸೂಕ್ತವಲ್ಲ. ಮತ್ತು ಇವರಲ್ಲಿ ಬಹಳಷ್ಟು ಮಂದಿ ಕೋಮುವಾದವನ್ನು ದೃಢವಾಗಿ ವಿರೋಧಿಸುವಲ್ಲಿ ಬದ್ಧತೆಯನ್ನು ತೋರದೆ ಹಿಂಜರಿಕೆ ಪ್ರದರ್ಶಿಸಿದ್ದಾರೆ ಹಾಗೂ ಕೋಮುವಾದವನ್ನು ದೃಢವಾಗಿ ಎದುರಿಸಬೇಕೆಂಬ ಬಗ್ಗೆಯೇ ಅನುಮಾನಗಳನ್ನು ಹೊಂದಿದ್ದಾರೆ.ವರದಿಯ ಸಂಪೂರ್ಣ ಪಠ್ಯವನ್ನು ಪರಿಶೀಲಿಸಿದ ನಂತರವಷ್ಟೆ ಆಯೋಗದ ಮುಂದೆ ತರಲಾದ ವಾಸ್ತವಾಂಶಗಳನ್ನು ಸಾಬೀತುಗೊಳಿಸಲಾಗಿದೆಯೇ ಮತ್ತು ಆಯೋಗ ಕಂಡುಕೊಂಡ ಅಂಶಗಳು ಮತ್ತು ಆಯೋಗದ ಶಿಫಾರಸ್ಸುಗಳು ಆಯೋಗದ ಮುಂದೆ ತರಲಾದ ವಾಸ್ತವಗಳನ್ನು ಒಳಗೊಂಡಿವೆಯೇ ಎಂದು ಹೇಳಬಹುದಾಗಿದೆ. ಆಯೋಗದ ವರದಿಯನ್ನು ಪೂರ್ಣ ಪರಿಶೀಲಿಸಿ ಈ ಕೆಳಕಂಡ ವಿವಿಧ ಆಯಾಮಗಳ ಕುರಿತು ಅಂದಾಜು ಮಾಡಬೇಕಿದೆ. ಈ ಅಂಶಗಳು ಪ್ರಜಾಪ್ರಭುತ್ವವಾದಿ, ಜಾತ್ಯಾತೀತ ಹಾಗೂ ಕಾನೂನಿನ ಆಡಳಿತಕ್ಕೆ ಬದ್ಧವಾದ ಜನರಿಗೆಲ್ಲಾ ಗೊತ್ತಿರುವುದೇ ಆಗಿದೆ. ಈ ದಾಳಿಯನ್ನು ಯೋಜಿಸಿದ್ದು ಮತ್ತು ಜಾರಿಗೊಳಿಸಿದ್ದು ಹಿಂದುತ್ವವಾದಿ ಶಕ್ತಿಗಳು.
ನಿರ್ಧಿಷ್ಟವಾಗಿ ದಾವಣಗೆರೆ ಜಿಲ್ಲೆಯ ಬಾಡ ಗ್ರಾಮದಲ್ಲಿ ಜುಲೈ 2008 ರಲ್ಲಿ ದಾಳಿ ಆರಂಭಿಸಲಾಯಿತು. ಮುಂದೆ ಅದನ್ನು ವಿಸ್ತರಿಸಿ ದಾವಣಗೆರೆಯ ಮೂರು ಚರ್ಚಗಳ ಮೇಲೆ ದಾಳಿ ನಡೆಸಲಾಯಿತು. ಮತ್ತು ಜಿಲ್ಲಾಡಳಿತವು ಆಗಸ್ಟ್ 2008 ರಲ್ಲಿ ಈ ಚರ್ಚಗಳನ್ನು ಮುಚ್ಚಲು ಆದೇಶಿಸಿತು. ಇದೇ ಶಕ್ತಿಗಳು ದಾಳಿಯನ್ನು ರಾಜ್ಯವ್ಯಾಪಿಯಾಗಿ ವಿಸ್ತರಿಸಿದವು. ಈ ಕ್ರಿಮಿನಲ್ ಯೋಜನೆಯ ಭಾಗವಾಗಿ ಸೆಪ್ಟಂಬರ್ 14, 2008 ರಂದು ಅತ್ಯಂತ ಸಂಯೋಜಿತವಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರುಗಳಲ್ಲಿ ಹರಡಿಕೊಂಡ 14 ಚರ್ಚಗಳ ಮೇಲೆ ಧಾಳಿ ನಡೆಯಿತು. ನಂತರ 15 ಮತ್ತು 16ನೇ ತಾರಿಕುಗಳಂದು ಮಂಗಳೂರಿನಲ್ಲಿ ಪೋಲಿಸರು ಚರ್ಚಗಳೊಳಗೆ ಪ್ರವೇಶಿಸಿದರು ಮತ್ತು ಬಹಿರಂಗವಾಗಿ ಪಾದ್ರಿಗಳು, ಕ್ರಿಶ್ಚಿಯನ್ ಸಂನ್ಯಾಸಿನಿಯರು ಮತ್ತು ಭಕ್ತರನ್ನು ಥಳಿಸಿದರು. ಈ ಎಲ್ಲದಕ್ಕೆ ಅಧಿಕಾರ ರೂಢ ಸರ್ಕಾರದ ಆಶೀರ್ವಾದವಿತ್ತು ಮಾತ್ರವಲ್ಲ ಅದರ ಮುಖಂಡರೇ ಸ್ವತಃನಿಂತು ಪೋಲಿಸ್ ವ್ಯವಸ್ಥೆಯು ಅಲ್ಪಸಂಖ್ಯಾತರ ಆರಾಧನಾ ಕೇಂದ್ರಕ್ಕೆ ರಕ್ಷಣೆ ನೀಡುವುದನ್ನು ತಪ್ಪಿಸುತ್ತಿದ್ದರು. ಈ ರೀತಿಯ ಸಂಘಟಿತ ಮತ್ತು ಪೂರ್ವಯೋಜಿತ ಕ್ರಿಮಿನಲ್ ದಾಳಿಯು ಜನವರಿ 2010 ರವರೆಗೆ ಮುಂದುವರೆಯಿತು.ಆಯೋಗದ ತನಿಖೆಯು ಈ ಎಲ್ಲ ಅಂಶಗಳನ್ನು ಪರಿಶೀಲಿಸಿದೆಯೆ...? ಆಯೋಗ ಕಂಡುಕೊಂಡ ಅಂಶಗಳು ಈ ಅಂಶಗಳನ್ನು ನಿರೂಪಿಸಿತ್ತವೆಯೇ? ಇತ್ಯಾದಿ ಪ್ರಶ್ನೆಗಳನ್ನು ಆಯೋಗದ ವರದಿಯ ಪೂರ್ಣ ಅಧ್ಯಯನದ ನಂತರವಷ್ಟೇ ಹೇಳಬಹುದಾಗಿದೆ.
ಸೌಜನ್ಯ: ಜನಶಕ್ತಿ